Wednesday 5 October 2016

ವಿಜ್ಞಾನ ಜಗತ್ತಿನ ದಿಕ್ಕನ್ನೇ ಬದಲಾಯಿಸಿದ ಕ್ವಾಂಟಮ್ ಸಿದ್ಧಾಂತ

ವಿಜ್ಞಾನ ಜಗತ್ತಿನ ದಿಕ್ಕನ್ನೇ ಬದಲಾಯಿಸಿದ ಕ್ವಾಂಟಮ್ ಸಿದ್ಧಾಂತ
ಕ್ವಾಂಟಮ್ ಸಿದ್ದಾಂತ ಅಥವಾ ಕಣಸಿದ್ಧಾಂತವೆಂಬ ಸಿದ್ಧಾಂತವು ಇಪ್ಪತ್ತನೇ ಶತಮಾನದಲ್ಲಿ ಭೌತಶಾಸ್ತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿದ ಸಿದ್ಧಾಂತ ಎಂದರೆ ತಪ್ಪಾಗಲಾರದು. ನಾವು ಈ ವಿಶ್ವವನ್ನು ನೋಡುವ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿದ ಸಿದ್ಧಾಂತವಿದು. ಮ್ಯಾಕ್ಸ್ ಪ್ಲಾಂಕ್ 1900ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರತಿಪಾದಿಸಿದ ಈ ಸಿದ್ಧಾಂತ ಅತ್ಯಂತ ವಿಶಾಲವಾದದ್ದು. ನಾವು ಈ ಜಗತ್ತಿನಲ್ಲಿ ನೋಡುವ ಪ್ರತಿಯೊಂದು ವಸ್ತುವಿಗೂ ಅನ್ವಯಿಸಬಹುದಾದ ಸಿದ್ಧಾಂತವಿದು. ಇದನ್ನು ಮೊದಲಿಗೆ ಪ್ರತಿಪಾದಿಸಿದ್ದು ಪ್ಲಾಂಕ್ ಆದರೂ ಇದನ್ನು ಯಾವುದೇ ಒಬ್ಬ ವ್ಯಕ್ತಿಯ ಕೊಡುಗೆ ಎಂದು ಬಣ್ಣಿಸುವುದು ಕಷ್ಟ. ಏಕೆಂದರೆ ಈ ಸಿದ್ಧಾಂತವನ್ನು ಓದುವಾಗ ನಾವು ವೂಲ್ಫ್ ಗ್ಯಾಂಗ್ ಪೌಲಿ, ವರ್ನನ್ ಹೈಸನ್ ಬರ್ಗ್, ಎರ್ವಿನ್ ಶ್ರೋಡಿಂಜರ್ ಮುಂತಾದವರ ಕೊಡುಗೆಗಳನ್ನೂ ಸಹ ಎಂದೆಂದೂ ಮರೆಯುವಂತೆಯೇ ಇಲ್ಲ. ಭೌತಶಾಸ್ತ್ರದಲ್ಲಿ ಸಾಮಾನ್ಯವಾಗಿ ಯಾವುದೇ ಸಿದ್ಧಾಂತವನ್ನು ಪ್ರತಿಪಾದಿಸುವಾಗಲೂ ಒಂದು ಸೀಮಿತ ಪರಿಧಿಯಲ್ಲಿ ಆಲೋಚಿಸಲು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಒಂದು ವಿಷಯಕ್ಕೆ ಹಲವಾರು ಆಯಾಮಗಳಿರುತ್ತವೆ ಮತ್ತು ಎಲ್ಲ ಆಯಾಮಗಳೂ ಒಂದಕ್ಕೊಂದು ಸಂಬಂಧಿಸಿರುತ್ತವೆ. ಯಾವುದೇ ಒಂದನ್ನು ಬಿಟ್ಟರೂ ಉಳಿದವುಗಳೆಲ್ಲ ಅಪೂರ್ಣವೆನ್ನಿಸುತ್ತವೆ. ಸಾಮಾನ್ಯವಾಗಿ ಕ್ವಾಂಟಮ್ ಸಿದ್ಧಾಂತದ ಬಗೆಗೆ ಮಾತನಾಡುವಾಗ ಬೆಳಕಿನ ಕ್ವಾಂಟಮ್ ಸಿದ್ಧಾಂತ ಎಂಬ ಪದವನ್ನು ಕೇಳುತ್ತೇವೆ. ಆದರೆ ಕ್ವಾಂಟಮ್ ಸಿದ್ಧಾಂತ ಕೇವಲ ಬೆಳಕಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಇಡೀ ವಿಶ್ವದ ಅಣು,ರೇಣು ಪರಮಾಣುಗಳಿಗೆ ಸಂಬಂಧಿಸಿದ್ದು ಮತ್ತು ಇಡೀ ವಿಶ್ವವನ್ನು ನಿಯಂತ್ರಿಸುತ್ತಿರುವ ಮೂಲಭೂತ ಬಲಗಳನ್ನು ಈ ಸಿದ್ಧಾಂತದಿಂದ ವಿವರಿಸಬಹುದು.
ಮೊದಲಿಗೆ ಕ್ವಾಂಟಮ್ ಸಿದ್ಧಾಂತವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಕ್ವಾಂಟಮ್ ಎಂದರೆ ಒಂದು ಕಣ ಅಥವಾ ಒಂದು ಪ್ರಮಾಣ ಎಂಬ ಅರ್ಥವಿದೆ. ನಾವು ಯಾವುದೇ ವಸ್ತುವೊಂದನ್ನು ವಿಭಾಗಿಸುತ್ತ ಹೋದರೆ ಅದನ್ನು ಎಲ್ಲಿಯವರೆಗೆ ವಿಭಾಗಿಸಬಹುದು? ಉದಾಹರಣೆಗೆ ನಿಮ್ಮ ಬಳಿ ಒಂದು ಸಣ್ಣ ಕಡ್ಡಿಯಿದೆ ಎಂದುಕೊಳ್ಳಿ. ಅದನ್ನು ನೀವು ಎರಡು ತುಂಡು ಮಾಡಬಹುದು. ಆ ಎರಡು ತುಂಡುಗಳನ್ನೂ ಪುನಃ ತುಂಡರಿಸಿ ನಾಲ್ಕು ತುಂಡು ಮಾಡಬಹುದು. ನಾಲ್ಕು ತುಂಡುಗಳನ್ನು ಎಂಟು ತುಂಡು ಮಾಡಬಹುದು. ಹೀಗೆ ತುಂಡುಮಾಡುತ್ತ ಎಲ್ಲಿಯವರೆಗೆ ಮಾಡಬಹುದು? ನಮ್ಮ ದೃಷ್ಟಿ ಬಲು ಸೀಮಿತ. ಒಂದು ಹಂತಕ್ಕೆ ಹೋದಬಳಿಕ, ಕಡ್ಡಿಯ ಗಾತ್ರ ಚಿಕ್ಕದಾದಂತೆ ನಮ್ಮ ಕಷ್ಟಗಳೂ ಹೆಚ್ಚುತ್ತವೆ. ಕಡ್ಡಿಯ ಉದ್ದ ಒಂದು ಮಿಲಿಮೀಟರ್ ಅಥವಾ ಅದಕ್ಕಿಂತ ಕಡಿಮೆಯಾದರೆ ನೀವು ಅದನ್ನು ತುಂಡರಿಸಬಲ್ಲಿರಾ? ಬರಿಗೈಯಲ್ಲಿ ಅದನ್ನು ತುಂಡರಿಸಲು ಖಂಡಿತಾ ಸಾಧ್ಯವೇ ಇಲ್ಲ. ಅದಕ್ಕಾಗಿ ಸೂಕ್ಷ್ಮವಾದ ಉಪಕರಣಗಳನ್ನು ಬಳಸಬೇಕಾಗುತ್ತದೆ. ಆದರೆ ಆ ಉಪಕರಣಗಳಿಗೂ ಒಂದು ಮಿತಿಯೆಂಬುದು ಇರಲೇಬೇಕಲ್ಲ? ಒಂದು ನಿರ್ದಿಷ್ಟ ಗಾತ್ರಕ್ಕಿಂತ ಚಿಕ್ಕದಾಗಿ ಕಡ್ಡಿಯನ್ನು ಕತ್ತರಿಸಲು ಯಾವ ಉಪಕರಣಕ್ಕೂ ಸಾಧ್ಯವಾಗುವುದಿಲ್ಲ. ಹಾಗಾದರೆ ಆ ಮಿತಿ ಎಷ್ಟು? ಅದನ್ನು ಹೇಗೆ ಕಂಡುಹಿಡಿಯುವುದು?
ಇಂಥ ಪ್ರಶ್ನೆಗಳು ಮಾನವನನ್ನು ಕಾಡುತ್ತಿರುವುದು ಇಂದುನಿನ್ನೆಯಲ್ಲ. ಸಾವಿರಾರು ವರ್ಷಗಳಿಂದ ಈ ಪ್ರಶ್ನೆ ಕಾಡುತ್ತಲೇ ಇದೆ. 1808ರಲ್ಲಿ ಜಾನ್ ಡಾಲ್ಟನ್ ಎಂಬಾತ ಮೊದಲಬಾರಿಗೆ “ಆ್ಯಟಮ್” (ಪರಮಾಣು) ಎಂಬ ಪದವನ್ನು ಬಳಸಿದ. ಈ ಪದದ ಅರ್ಥ ವಿಭಜಿಸಲಾಗದ್ದು ಎಂದು. ಅಂದರೆ ಒಂದು ವಸ್ತುವನ್ನು ನೀವು ಸತತವಾಗಿ ವಿಭಜಿಸುತ್ತ ಹೋದರೆ ಕೊನೆಗೆ ಒಂದು ಹಂತವನ್ನು ತಲುಪುತ್ತೀರಿ. ಆ ಹಂತದಿಂದ ಮುಂದಕ್ಕೆ ಅದನ್ನು ವಿಭಜಿಸಲು ಸಾಧ್ಯವೇ ಇಲ್ಲ. ಆ ಕಟ್ಟಕಡೆಯ ಚೂರನ್ನೇ ಪರಮಾಣುವೆನ್ನುವುದು. ಆದರೆ ಡಾಲ್ಟನ್ ಅಂದು ಪ್ರತಿಪಾದಿಸಿದ ಪರಮಾಣು ಇಂದು ಅವಿಭಜಿತವಾಗಿ ಉಳಿದಿಲ್ಲ. ಪರಮಾಣುವು ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಈ ಮೂರು ಪ್ರಧಾನವಾದ ಉಪಕಣಗಳಿಂದಾಗಿವೆ ಎಂಬುದನ್ನು ನಾವಿಂದು ತಿಳಿದಿದ್ದೇವೆ. ಈ ಉಪಕಣಗಳೆಲ್ಲ ಎಷ್ಟು ಚಿಕ್ಕವೆಂದರೆ ನಾವೆಂದೂ ಅದನ್ನು ನಾವು ಹೊಂದಿರುವ ಅತ್ಯಂತ ಪ್ರಬಲವಾದ ಸೂಕ್ಷ್ಮದರ್ಶಕದಿಂದಲೂ ನೋಡಲು ಸಾಧ್ಯವಿಲ್ಲ. ನಾವಿಂದು ತಿಳಿದಿರುವುದೆಲ್ಲ ಪರೋಕ್ಷ ವಿಧಾನಗಳಿಂದ ಅಷ್ಟೆ. ಹಾಗಾದರೆ ಪರಮಾಣುಗಳನ್ನೇಕೆ ನಾವು ನೋಡಲಾಗುವುದಿಲ್ಲ? ಅವೆಷ್ಟೇ ಚಿಕ್ಕದಾಗಿದ್ದರೂ ಸಹ ಪ್ರಬಲವಾದ ಮಸೂರಗಳನ್ನು ಬಳಸಿ ಸೂಕ್ಷ್ಮದರ್ಶಕಗಳನ್ನು ತಯಾರಿಸಿದರೆ ಅವುಗಳನ್ನು ನೋಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ಅದು ಸಾಧ್ಯವಿಲ್ಲ. ಏಕೆ ಸಾಧ್ಯವಿಲ್ಲ ಎನ್ನುವುದಕ್ಕೆ ನಾವು ಯಾವುದೇ ವಸ್ತುವನ್ನು ನೋಡುವುದು ಎಂದರೇನು ಮತ್ತು ಅದರ ತಂತ್ರಜ್ಞಾನವೇನು, ನಮ್ಮ ಕಣ್ಣಿನಲ್ಲಿ ನೋಟ ಎನ್ನುವ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.
ನಾವು ಯಾವುದೇ ವಸ್ತುವನ್ನು ನೋಡಬೇಕಾದರೆ ನಮಗೆ ಬಹಳ ಮುಖ್ಯವಾಗಿ ಬೇಕಾಗಿರುವುದು ಬೆಳಕು. ವಸ್ತುವಿನ ಮೇಲೆ ಬಿದ್ದು ಪ್ರತಿಫಲಿಸಿದ ಬೆಳಕು ನಮ್ಮ ಕಣ್ಣಿನಲ್ಲಿ ಬಿದ್ದು ಅದರ ಸಂಜ್ಞೆಗಳು ಮೆದುಳಿಗೆ ತಲುಪಿ ಅಲ್ಲಿ ನಮಗೆ ದೃಶ್ಯದ ಅನುಭವವಾಗುತ್ತದೆ. ಹಾಗಾದರೆ ಆ ಬೆಳಕು ಹೇಗಿರಬೇಕು? ಬೆಳಕು ಹೇಗಿರಬೇಕೆಂದರೆ ಅದು ವಸ್ತುವಿನ ಮೇಲೆ ಬಿದ್ದು ಹಿಮ್ಮರಳಿ ನಮ್ಮ ಕಣ್ಣಿನ ಮೇಲೆ ಬೀಳುವಂತಿರಬೇಕು. ಹಾಗಿದ್ದರೆ ಮಾತ್ರ ನಿಮಗೆ ವಸ್ತು ಕಾಣಿಸುತ್ತದೆ. ಒಂದು ವಸ್ತು ಸಂಪೂರ್ಣ ಪಾರದರ್ಶಕವಾಗಿದ್ದರೆ ಅದನ್ನು ನೀವು ನೋಡಬಲ್ಲಿರಾ? ನೋಡಲು ಸಾಧ್ಯವೇ ಇಲ್ಲ. ಗಾಜಿನ ಗೋಡೆಯೊಂದು ಅತ್ಯಂತ ಸ್ವಚ್ಛವಾಗಿದ್ದರೆ ನಿಮಗೆ ಅದನ್ನು ಗುರುತಿಸಲು ಕಷ್ಟವಾಗುತ್ತದೆ ಅಲ್ಲವೇ? ಆದರೂ ನಮಗೆ ಇಂದು ತಿಳಿದಿರುವ ಅತ್ಯಂತ ಪಾರದರ್ಶಕವಾದ ಗಾಜು ಕೂಡ ಕನಿಷ್ಠ ಶೇಕಡಾ ನಾಲ್ಕರಷ್ಟಾದರೂ ಬೆಳಕನ್ನು ಪ್ರತಿಫಲಿಸುತ್ತದೆ. ಹಾಗಾಗಿ ನಾವು ಗಾಜನ್ನು ಕಾಣಲು ಸಾಧ್ಯ. ಪ್ರಕೃತಿಯಲ್ಲಿ ನಾವು ಬಹುತೇಕ ಪಾರದರ್ಶಕವಾಗಿ ಶತ್ರುಗಳ ಕಣ್ಣಿಗೆ ಅಗೋಚರವಾಗಿರುವ ಅನೇಕ ಜೀವಿಗಳನ್ನು ನೋಡಬಹುದು. ಇಂಥ ಜೀವಿಗಳು ಸಾಗರಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ಇದೇ ತತ್ವವನ್ನು ನಾವು ಪರಮಾಣುಗಳ ವಿಷಯದಲ್ಲೂ ಅನ್ವಯಿಸಬಹುದು. ಆದರೆ ಇಲ್ಲಿ ವ್ಯಾಖ್ಯಾನ ಮಾಡುವ ರೀತಿ ಸ್ವಲ್ಪ ಬೇರೆಯಾಗಿರುತ್ತದೆ ಅಷ್ಟೆ.
ಬೆಳಕು ಒಂದು ವಸ್ತುವಿನ ಮೇಲೆ ಬಿದ್ದು ಹಿಮ್ಮರಳಿ ಬರಬೇಕಾದರೆ ಆ ವಸ್ತುವಿನ ಗಾತ್ರ ಬೆಳಕಿನ ತರಂಗಾಂತರಕ್ಕಿಂತ ಹೆಚ್ಚಾಗಿರಬೇಕಾದುದು ಅತ್ಯವಶ್ಯಕ. ಹಾಗಲ್ಲದೆ ಬೆಳಕಿನ ತರಂಗಾಂತರಕ್ಕಿಂತ ವಸ್ತುವಿನ ಗಾತ್ರವೇ ಚಿಕ್ಕದಾದರೆ ಬೆಳಕು ವಸ್ತುವನ್ನು ದಾಟಿ ಹಾದುಹೋಗುತ್ತದೆಯೇ ಹೊರತು ಹಿಮ್ಮರಳಿ ಬರಲಾರದು. ಸಮಸ್ಯೆ ಇರುವುದೇ ಇಲ್ಲಿ. ಪರಮಾಣುಗಳ ಗಾತ್ರ ಎಷ್ಟೊಂದು ಚಿಕ್ಕದೆಂದರೆ ಬೆಳಕಿನ ಅಲೆಗಳ ತರಂಗಾಂತರಕ್ಕಿಂತ ಚಿಕ್ಕದು. ಹಾಗಾಗಿ ಪರಮಾಣುಗಳನ್ನು ನೋಡಲು ಸಾಧ್ಯವಿಲ್ಲವಾಗಿದೆ.
ಸದ್ಯಕ್ಕೆ ನಾವು ಈ ಸಮಸ್ಯೆಯನ್ನು ಇಲ್ಲಿಗೆ ಕೈಬಿಟ್ಟು ಕಣಸಿದ್ಧಾಂತದ ಮುಖ್ಯವಾಹಿನಿಗೆ ಬರೋಣ. ಬೆಳಕಿನ ಬಗ್ಗೆ ಈಗ ಕೆಲವೊಂದು ವಿಷಯಗಳನ್ನು ತಿಳಿದೆವು. ಹಾಗಾದರೆ ಬೆಳಕು ಎಂಬುದು ನಿಜಕ್ಕೂ ಏನು? ನಾವು ದಿನನಿತ್ಯ ನೋಡುವ ನೂರೆಂಟು ವಸ್ತುಗಳಂತೆಯೇ ಬೆಳಕು ಸಹ ಒಂದು ವಸ್ತುವೇ? ಈ ಪ್ರಶ್ನೆ ಮನುಷ್ಯನನ್ನು ಕಾಡುತ್ತಿದ್ದುದು ಇಂದುನಿನ್ನೆಯಲ್ಲ. ಸಾವಿರಾರು ವರ್ಷಗಳಿಂದ, ಮನುಷ್ಯ ಎಂದು ಬೇರೆ ಪ್ರಾಣಿಗಳಿಗಿಂತ ಹೆಚ್ಚಿನ ಆಲೋಚನಾಶಕ್ತಿಯನ್ನು ಪಡೆದುಕೊಂಡನೋ ಅಂದಿನಿಂದಲೇ ಈ ಪ್ರಶ್ನೆ ಅವನ ಮನಸ್ಸಿನಲ್ಲಿ ಮೂಡಿತ್ತು. ಮೊದಲಬಾರಿಗೆ ಬೆಳಕಿನ ಕುರಿತು ಸಿದ್ಧಾಂತವೊಂದನ್ನು ಮಂಡಿಸಿದ್ದು ಸರ್ ಐಸಾಕ್ ನ್ಯೂಟನ್. ಬೆಳಕು ಅತ್ಯಂತ ಚಿಕ್ಕದಾದ ಅಸಂಖ್ಯ ಚಿಕ್ಕಚಿಕ್ಕ ಕಣಗಳಿಂದ ಮಾಡಲ್ಪಟ್ಟಿದೆ ಎಂದು ಆತ ಹೇಳಿದ. ಅದನ್ನು ಕಾರ್ಪಸ್ಕ್ಯುಲರ್ ಥಿಯರಿ ಆಫ್ ಲೈಟ್ ಎನ್ನುತ್ತಾರೆ. ಕಾರ್ಪಸಲ್ ಎಂದರೆ ಚಿಕ್ಕಚಿಕ್ಕ ಕಣಗಳು ಎಂದರ್ಥ. ಮುಂದೆ ಕ್ರಿಶ್ಚಿಯನ್ ಹೈಗನ್ಸ್ ಎಂಬಾತ ಬೆಳಕಿನ ಅಲೆಗಳ ಸಿದ್ಧಾಂತ (ವೇವ್ ಥಿಯರಿ ಆಫ್ ಲೈಟ್) ಮಂಡಿಸಿದ. ಆದರೆ ಈ ಎರಡು ಸಿದ್ಧಾಂತಗಳೂ ಬೆಳಕಿನ ಎಲ್ಲ ಗುಣಲಕ್ಷಣಗಳನ್ನು ವಿವರಿಸದಾದಾಗ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್ ಎಂಬಾತ ಬೆಳಕಿನ ವಿದ್ಯುದಯಸ್ಕಾಂತೀಯ ಅಲೆಗಳ ಸಿದ್ಧಾಂತವನ್ನು ಪ್ರತಿಪಾದಿಸಿದ. ಈ ಸಿದ್ಧಾಂತ ಬೆಳಕಿನ ಬಹುತೇಕ ಲಕ್ಷಣಗಳನ್ನು ಸಮರ್ಥವಾಗಿ ವಿವರಿಸಿತು. ಮುಂದೆ 1900ರಲ್ಲಿ ಬಂದಿದ್ದೇ ಮ್ಯಾಕ್ಸ್ ಪ್ಲಾಂಕ್ ನ ಕ್ವಾಂಟಂ ಸಿದ್ಧಾಂತ. ಈ ಸಿದ್ಧಾಂತ ಭೌತಶಾಸ್ತ್ರ ಜಗತ್ತಿನಲ್ಲೇ ಅತಿದೊಡ್ಡ ಕ್ರಾಂತಿಯ ಅಲೆಗಳನ್ನೆಬ್ಬಿಸಿತು ಎಂದರೆ ತಪ್ಪಾಗಲಾರದು.
ಕ್ವಾಂಟಮ್ ಎಂದರೆ ಕಣ ಎಂದು ಮೊದಲೇ ಹೇಳಿದೆನಷ್ಟೆ. ಪ್ಲಾಂಕ್ ಒಂದು ವಿವರಣೆಯನ್ನು ಮುಂದಿಟ್ಟ. ಬೆಳಕು ಅತ್ಯಂತ ಚಿಕ್ಕದಾದ ಕಣಗಳಿಂದ ಮಾಡಲ್ಪಟ್ಟಿದೆ ಎಂದು ನ್ಯೂಟನ್ ಮೊದಲೇ ಹೇಳಿದ್ದನಷ್ಟೆ. ಅದನ್ನು ಕೊಂಚ ಬದಲಾಯಿಸಿ ಅದನ್ನು ಭೌತಶಾಸ್ತ್ರದ ಪರಿಭಾಷೆಯಲ್ಲಿ ವಿವರಿಸುವ ಕೆಲಸವನ್ನು ಮ್ಯಾಕ್ಸ್ ಪ್ಲಾಂಕ್ ಮಾಡಿದ. ಬೆಳಕು ಒಂದು ಗೊತ್ತಾದ ಶಕ್ತಿಯ ಪೊಟ್ಟಣಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಆತ ಪ್ರತಿಪಾದಿಸಿದ. ಆ ಪೊಟ್ಟಣಗಳು ಪೂರ್ಣಸಂಖ್ಯೆಯಲ್ಲಿರುತ್ತವೆ. ಅಂದರೆ ಒಂದು, ಎರಡು, ಮೂರು ಹೀಗೆ ಪೊಟ್ಟಣಗಳು ಬಿಡುಗಡೆಯಾಗುತ್ತವೆಯೇ ಹೊರತು ಅರ್ಧ, ಒಂದೂಕಾಲು ಹೀಗೆ ದಶಮಾಂಶ, ಭಿನ್ನರಾಶಿಗಳು ಅದರಲ್ಲಿ ಬರುವುದೇ ಇಲ್ಲವೆಂದು ಆತ ಸ್ಪಷ್ಟವಾಗಿ ತಿಳಿಸಿದ. ಅವನು ಭೌತಶಾಸ್ತ್ರದ ಒಂದು ಮಹತ್ವದ ನಿಯತಾಂಕವನ್ನೂ ಸಹ ಕಂಡುಹಿಡಿದ. ಪ್ಲಾಂಕ್ ನಿಯತಾಂಕ ಎಂದೇ ಕರೆಯಲಾಗುವ ಈ ನಿಯತಾಂಕದ ಮೇಲೆಯೇ ಜಗತ್ತಿನ ಎಲ್ಲ ಮೂಲಭೂತ ಕ್ವಾಂಟಮ್ ಸಿದ್ಧಾಂತದ ತತ್ವಗಳು ನಿಂತಿವೆ. ಈ ನಿಯತಾಂಕದ ಬೆಲೆ ತೀರಾ ನಗಣ್ಯವೆನ್ನಿಸುವಷ್ಟು ಚಿಕ್ಕದು. ಆದರೆ ಇದರ ಬೆಲೆ ಚಿಕ್ಕದೇ ಹೊರತು ಇದರ ಪ್ರಾಮುಖ್ಯತೆ ಚಿಕ್ಕದಲ್ಲ!
ಒಂದು ಗೊತ್ತಾದ ಪ್ರಮಾಣದ ಬೆಳಕು ಬಿಡುಗಡೆಯಾದಾಗ ಅದರಲ್ಲಿ ಎಷ್ಟು ಶಕ್ತಿ ಇರುತ್ತದೆ ಎಂಬುದನ್ನು ವಿವರಿಸುವ ಸೂತ್ರವನ್ನು ಈ ನಿಯತಾಂಕದ ಮೂಲಕ ಪ್ಲಾಂಕ್ ಜಗತ್ತಿಗೆ ಸಾರಿದ. ಬೆಳಕಿನ ಶಕ್ತಿಯನ್ನು ಆಂಗ್ಲಭಾಷೆಯ ಇ (E) ಅಕ್ಷರದಿಂದ ಸೂಚಿಸುತ್ತಾರೆ. ಪ್ಲಾಂಕ್ ನಿಯತಾಂಕವನ್ನು ಆಂಗ್ಲಭಾಷೆಯ ಚಿಕ್ಕ ಎಚ್ (h) ಅಕ್ಷರದಿಂದ ಗುರುತಿಸುತ್ತಾರೆ. ಬೆಳಕಿನ ಫ್ರೀಕ್ವೆನ್ಸಿ (ಒಂದು ಸೆಕೆಂಡಿಗೆ ಬೆಳಕಿನ ವೇಗ 299792458 ಮೀಟರ್ ಗಳು. ಇಷ್ಟು ಅವಕಾಶದಲ್ಲಿ, ಅಂದರೆ 299792458 ಮೀಟರ್ ಉದ್ದದ ಬೆಳಕಿನ ಕಿರಣವೊಂದರಲ್ಲಿ ಎಷ್ಟು ತರಂಗಾಂತರಗಳಿರುತ್ತವೆ ಎಂಬುದೇ ಬೆಳಕಿನ ಫ್ರೀಕ್ವೆನ್ಸಿ ಎನ್ನುತ್ತಾರೆ. ಈ ಸಂಖ್ಯೆ ಹೆಚ್ಚಾದಷ್ಟೂ ಬೆಳಕಿನ ಶಕ್ತಿಯೂ ಹೆಚ್ಚುತ್ತದೆ). ಪ್ಲಾಂಕ್ ಎಂಬ ಸೂತ್ರವೊಂದನ್ನು ನೀಡಿದ. ಐನ್ ಸ್ಟೀನ್ ಪ್ರತಿಪಾದಿಸಿದ ಸಾಪೇಕ್ಷತಾ ಸಿದ್ಧಾಂತಕ್ಕೆ ಹೇಗೆ ಸೂತ್ರವು ತಳಹದಿಯಾಗಿದೆಯೋ ಹಾಗೆ ಕ್ವಾಂಟಮ್ ಸಿದ್ಧಾಂತಕ್ಕೆ ಇದೇ ಸೂತ್ರ ತಳಹದಿಯಾಗಿದೆ. ಇದರಲ್ಲಿ ಕ್ವಾಂಟಮ್ ನಿಯತಾಂಕದ ಬೆಲೆ ಎಷ್ಟು ಗೊತ್ತೆ? 6.626x10-34 ಎಂಬ ಸಂಖ್ಯೆ. ಈ ಸಂಖ್ಯೆ ಎಷ್ಟು ಚಿಕ್ಕದೆಂದು ಗಣಿತಶಾಸ್ತ್ರದ ಜ್ಞಾನವಿಲ್ಲದವರಿಗೆ ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಈ ಸಂಖ್ಯೆಯನ್ನು 0.00000000000000000000000000000000006626 ಎಂದು ಸಹ ಬರೆಯಬಹುದು. ಸರಳವಾಗಿ ಹೇಳಬೇಕೆಂದರೆ ನಮ್ಮ ಇಡೀ ಭೂಮಿಗೆ ಹೋಲಿಸಿದರೆ ಸಮುದ್ರದ ದಡದಲ್ಲಿರುವ ಒಂದು ಮರಳಿನ ಕಣ ಎಷ್ಟು ಅಲ್ಪವೋ ಈ ಸಂಖ್ಯೆಯು ಒಂದು ಎಂಬ ಸಂಖ್ಯೆಗೆ ಹೋಲಿಸಿದರೆ ಅದಕ್ಕಿಂತ ಚಿಕ್ಕದು! ಈಗ ನಿಮಗೆ ಇದರ ಬಗ್ಗೆ ಸಾಕಷ್ಟು ಕಲ್ಪನೆ ಬಂದಿರಬಹುದು.
ಇಲ್ಲಿ ಫೋಟಾನ್ (ಪ್ರೋಟಾನ್ ಅಲ್ಲ) ಎಂಬ ಹೊಸ ಪದವೊಂದು ಬಳಕೆಗೆ ಬಂದಿತು. ಫೋಟೋ ಎಂಬ ಪದದ ಅರ್ಥ ಬೆಳಕು ಎಂದು. ಫೋಟಾನ್ ಎಂದರೆ ಬೆಳಕಿನ ಕಣ ಎಂದರ್ಥ. ನ್ಯೂಟನ್ನನ ಕಣಸಿದ್ಧಾಂತದಿಂದ ಸಾಬೀತುಪಡಿಸಲು ಸಾಧ್ಯವಾಗದ ಬೆಳಕಿನ ಗುಣಲಕ್ಷಣಗಳನ್ನೆಲ್ಲ ಪ್ಲಾಂಕ್ ನ ಕ್ವಾಂಟಮ್ ಸಿದ್ಧಾಂತ ಸಮರ್ಪಕವಾಗಿ ವಿವರಿಸಿತು. ಆದ್ದರಿಂದ ಇಂದು ಬೆಳಕಿನ ಸಿದ್ಧಾಂತಗಳ ಪೈಕಿ ಪ್ಲಾಂಕ್ ನ ಕ್ವಾಂಟಮ್ ಸಿದ್ಧಾಂತ ಮತ್ತು ಮ್ಯಾಕ್ಸ್ ವೆಲ್ ನ ವಿದ್ಯುದಯಸ್ಕಾಂತೀಯ ಅಲೆಗಳ ಸಿದ್ಧಾಂತಗಳು ಪ್ರಬಲವಾಗಿ ನಿಂತಿವೆ.
ಈ ಸಿದ್ಧಾಂತವು ಬೆಳಕಿಗೆ ದ್ವಂದ್ವಪ್ರಕೃತಿ ಇದೆ ಎಂದು ಪ್ರತಿಪಾದಿಸಿತು. ಅಂದರೆ ಬೆಳಕನ್ನು ಕೇವಲ ಅಲೆ ಅಥವಾ ಕೇವಲ ಕಣ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎರಡೂ ಪ್ರಕೃತಿಗಳಿವೆ. ಅದು ಕಣವೂ ಆಗಿರಬಲ್ಲದು ಹಾಗೂ ಅಲೆಯೂ ಆಗಿರಬಲ್ಲದು ಎಂಬುದೇ ಇದರ ತಿರುಳು. ಇದು ವಿಚಿತ್ರವೆನ್ನಿಸುತ್ತದೆ ಮತ್ತು ನಂಬಲಸಾಧ್ಯವಾಗಿ ಕಾಣುತ್ತದೆ. ಆದರೆ ಇದನ್ನು ನಮ್ಮ ದಿನನಿತ್ಯದ ಕೆಲವೊಂದು ಉದಾಹರಣೆಗಳಿಗೆ ಹೋಲಿಸಿನೋಡಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಹುದು. ಅಲೆಯೆಂದರೆ ಅದನ್ನು ಕೈಯಲ್ಲಿ ಹಿಡಿಯಲಾಗದಂಥ ಒಂದು ಅನುಭೂತಿ. ಆದರೆ ಕಣವೆಂದರೆ ನಾವು ಮುಟ್ಟಬಹುದಾದಂಥ ಮತ್ತು ಅನುಭವಿಸಬಹುದಾದಂಥ ವಸ್ತು. ಹಾಗಾದರೆ ಒಂದು ವಸ್ತುವು ಅಲೆಯಾಗಿ ಅಥವಾ ಅಲೆ ವಸ್ತುವಾಗಿ ಬದಲಾಗುವುದು ಹೇಗೆ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ನಮ್ಮ ನಿತ್ಯಜೀವನದ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ.
ಉದಾಹರಣೆಗೆ ನೀವು ಹೊಗೆಯನ್ನು ತೆಗೆದುಕೊಳ್ಳಿ. ಹೊಗೆಯು ಒಂದು ರೀತಿಯ ಅನಿಲ. ಇದನ್ನು ಒಂದು ಅಲೆಯೆಂದು ಭಾವಿಸಿಕೊಳ್ಳಿ. (ವಾಸ್ತವವಾಗಿ ಇದು ಅಲೆಯಲ್ಲ, ಆದರೆ ಅದು ಒಂದು ಅನಿಲದ ಅಲೆಯಂತೆ ಗಾಳಿಯಲ್ಲಿ ಪಸರಿಸುವುದರಿಂದ ಹಾಗೆಂದು ಭಾವಿಸಿಕೊಳ್ಳಬಹುದು). ಅದಕ್ಕೆ ಅಡ್ಡವಾಗಿ ಏನಾದರೂ ಒಂದು ಹಾಳೆಯನ್ನು ಹಿಡಿಯಿರಿ. ಆಗ ಆ ಹಾಳೆಯ ಮೇಲೆ ಕಪ್ಪು ಮಸಿ ಕೂರುತ್ತದೆ ಅಲ್ಲವೇ? ಅದನ್ನು ಕೈಯಿಂದ ಮುಟ್ಟಿದರೆ ಅದು ಪುಡಿಪುಡಿಯಾಗಿ ಕೈಗೆ ಸಿಗುತ್ತದೆ ಅಲ್ಲವೇ? ಅಂದರೆ ಅನಿಲರೂಪದಲ್ಲಿ ಗಾಳಿಯಲ್ಲಿ ಸಾಗುತ್ತಿದ್ದ ಹೊಗೆ ಅಡ್ಡಲಾಗಿ ಏನಾದರೊಂದು ವಸ್ತು ಸಿಕ್ಕಿದರೆ ಅದರ ಮೇಲೆ ಅಂಟಿಕೊಂಡು ಘನರೂಪದ ಪುಡಿಯಾಗುತ್ತದೆ. ಬೆಳಕಿನ ದ್ವಂದ್ವಪ್ರಕೃತಿಯನ್ನೂ ಸಹ ಹೀಗೆಯೇ ಅರಿತುಕೊಳ್ಳಬಹುದು. ಚಲಿಸುತ್ತಿರುವಾಗ ತರಂಗರೂಪದಲ್ಲಿ ಚಲಿಸುವ ಬೆಳಕು ಒಂದು ವಸ್ತುವಿನ ಮೇಲೆ ಬಿದ್ದಕೂಡಲೇ ಕಣವಾಗಿ ಪರಿವರ್ತನೆ ಹೊಂದುತ್ತದೆ. ಸರ್ ಆಲ್ಬರ್ಟ್ ಐನ್ ಸ್ಟೀನ್ ಗೆ ನೊಬೆಲ್ ಬಹುಮಾನ ತಂದುಕೊಟ್ಟ ದ್ಯುತಿ ವಿದ್ಯುತ್ ಪರಿಣಾಮ (ಫೋಟೋ ಎಲೆಕ್ಟ್ರಿಕ್ ಎಫೆಕ್ಟ್) ಕೂಡ ಇದೇ ಸಿದ್ಧಾಂತವನ್ನು ಅವಲಂಬಿಸಿದೆ.
ಕ್ವಾಂಟಮ್ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಪರಮಾಣುವಿನ ಬೀಜದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನ್ ಗಳಿಗೆ ಒಂದು ಗೊತ್ತಾದ ನಿರ್ದಿಷ್ಟ ಪಥವಿದೆ. ಅಂದರೆ ಯಾವುದೇ ಎಲೆಕ್ಟ್ರಾನ್ ಪರಮಾಣು ಬೀಜದ ಸುತ್ತ ತನಗಿಷ್ಟ ಬಂದ ದಾರಿಯಲ್ಲಿ ಸಂಚರಿಸುವ ಹಾಗಿಲ್ಲ. ಕೆಲವು ಗೊತ್ತಾದ ಪಥಗಳಿದ್ದು ಅದೇ ಪಥಗಳಲ್ಲಿ ಅದು ಚಲಿಸಬೇಕು. ಒಂದು ವೇಳೆ ಅದು ಮೇಲಿನ ಪಥದಿಂದ ಚ್ಯುತವಾದರೆ ಕೆಳಗಿನ ಪಥಕ್ಕೆ ಬಂದು ಚಲಿಸಬೇಕು. ಮಧ್ಯದ ಜಾಗದಲ್ಲಿ ಚಲಿಸುವ ಹಾಗಿಲ್ಲ. ಅದೇಕೆ ಹಾಗೆಂದು ಇದುವರೆಗೆ ಯಾರಿಂದಲೂ ವಿವರಿಸಲಾಗಿಲ್ಲ. ಅದು ಭೌತಶಾಸ್ತ್ರದ ಒಂದು ಅಲಿಖಿತ ನಿಯಮವಷ್ಟೆ. ಇದರ ಪ್ರಕಾರ ಒಂದು ಎಲೆಕ್ಟ್ರಾನ್ ಮೇಲಿನ ಪಥದಿಂದ ಕೆಳಗಿನ ಪಥಕ್ಕೆ ಬರಬೇಕೆಂದರೆ ಅದು ಮೇಲಿನಿಂದ ಕೆಳಕ್ಕೆ ಹಾರುವಂತಿಲ್ಲ ಅಥವಾ ಕೆಳಗಿನ ಪಥದಿಂದ ಮೇಲಿನ ಪಥಕ್ಕೆ ಏರಬೇಕಾದರೂ ಹಾಗೆ ಮಾಡುವಂತಿಲ್ಲ. ಏಕೆಂದರೆ ಮಧ್ಯದ ದಾರಿ ಅವಕ್ಕೆ ನಿಷಿದ್ಧವಾದದ್ದು. ಹಾಗಾದರೆ ಎಲೆಕ್ಟ್ರಾನ್ ಗಳು ಹೇಗೆ ಪಥವನ್ನು ಬದಲಾಯಿಸುತ್ತವೆ? ನಂಬಲಸಾಧ್ಯವೆನ್ನಿಸಿದರೂ ನಂಬಲೇಬೇಕಾದ ಸಂಗತಿಯೊಂದಿದೆ. ಒಂದು ಪಥದಲ್ಲಿ ಎಲೆಕ್ಟ್ರಾನ್ ಅದೃಶ್ಯವಾಗುತ್ತದೆ. ಅದು ಅದೃಶ್ಯವಾದ ಬಗೆಗೆ ಸಂದೇಶ ಇನ್ನೊಂದು ಪಥಕ್ಕೆ ಬೆಳಕಿನ ವೇಗದಲ್ಲಿ ಚಲಿಸುತ್ತದೆ ಮತ್ತು ಆ ಸಂದೇಶ ಅಲ್ಲಿಗೆ ತಲುಪಿದ ಕೂಡಲೇ ಎಲೆಕ್ಟ್ರಾನ್ ಅಲ್ಲಿ ಪ್ರತ್ಯಕ್ಷವಾಗುತ್ತದೆ! ನೀವೇನಾದರೂ ಒಂದು ಊರಿನಿಂದ ಇನ್ನೊಂದು ಊರಿಗೆ ತಲುಪಬೇಕಾಗಿದ್ದರೆ ನಿಮ್ಮ ಮನೆಯಲ್ಲಿ ಅದೃಶ್ಯವಾಗಿ ಕ್ಷಣಾರ್ಧದಲ್ಲಿ ಹೋಗಬೇಕಾದ ಸ್ಥಳದಲ್ಲಿ ಪ್ರತ್ಯಕ್ಷವಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ನಿಮ್ಮ ಕನಸುಗಳಿಗೆ ಪೂರ್ಣವಿರಾಮ ಹಾಕಿ. ಏಕೆಂದರೆ ಈ ರೀತಿ ಆಗುವುದು ಪರಮಾಣುಗಳ ಪ್ರಪಂಚದಲ್ಲಿ ಮಾತ್ರ.
ಹಾಗಾದರೆ ಯಾವ ಪರಮಾಣುವಿನಲ್ಲಿ ಬೇಕಾದರೂ ಎಲೆಕ್ಟ್ರಾನ್ ಯಾವಾಗ ಬೇಕಾದರೂ ಯಾವ ಪಥದಿಂದ ಯಾವ ಪಥಕ್ಕೆ ಬೇಕಾದರೂ ನೆಗೆಯುತ್ತದೆಯೇ? ಖಂಡಿತ ಇಲ್ಲ. ಒಂದು ವೇಳೆ ಹಾಗಾಗುವುದಾಗಿದ್ದರೆ ಇಡೀ ಜಗತ್ತೇ ಅಧ್ವಾನವಾಗುತ್ತಿತ್ತು. ಬಹುಶಃ ಜಗತ್ತು ಈಗಿರುವಂತೆ ಅಸ್ತಿತ್ವದಲ್ಲಿರುತ್ತಲೇ ಇರಲಿಲ್ಲ. ನೀವು ನೆಲದ ಮೇಲೆ ನಿಂತಿದ್ದೀರೆಂದು ಭಾವಿಸಿಕೊಳ್ಳಿ. ಅಲ್ಲಿಂದ ನೀವು ಸ್ವಲ್ಪ ಎತ್ತರವಾಗಿರುವ ಒಂದು ಮೆಟ್ಟಿಲು ಅಥವಾ ವೇದಿಕೆಯ ಮೇಲೆ ನೆಗೆಯಬೇಕಾದರೆ ನಿಮಗೆ ಏನು ಬೇಕು? ಶಕ್ತಿ ಬೇಕು ತಾನೆ? ಇದೇ ಮಾತನ್ನು ಇಲ್ಲಿಯೂ ಅನ್ವಯಿಸಬಹುದು. ಎಲೆಕ್ಟ್ರಾನ್ ಒಂದು ಮೇಲಿನ ಪಥಕ್ಕೆ ಏರಬೇಕಾದರೆ ಅದಕ್ಕೆ ಶಕ್ತಿ ಬೇಕು. ಆ ಶಕ್ತಿಯನ್ನು ಹೊರಗಿನಿಂದ ನೀಡಬೇಕಾಗುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಒಂದು ಎಲೆಕ್ಟ್ರಾನ್ ಮೇಲಿನ ಪಥದಿಂದ ಕೆಳಗಿನ ಪಥಕ್ಕೆ ಬಿದ್ದರೆ ಅದು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಆ ಶಕ್ತಿಯು ಒಂದು ಫೋಟಾನ್ (ಬೆಳಕಿನ ಕಣ) ದ ರೂಪದಲ್ಲಿ ಬಿಡುಗಡೆಯಾಗುತ್ತದೆ. ನಾವಿಂದು ಜಗತ್ತಿನಲ್ಲಿ ನೋಡುತ್ತಿರುವ ಬೆಳಕೆಲ್ಲ ಶಕ್ತಿಯ ಒಂದು ರೂಪವೇ ಆಗಿದೆ.
ವರ್ನನ್ ಹೈಸನ್ ಬರ್ಗ್ ಎಂಬ ಇನ್ನೊಬ್ಬ ವಿಜ್ಞಾನಿ “ಅನ್ ಸರ್ಟನಿಟಿ ಪ್ರಿನ್ಸಿಪಲ್” ಎಂಬ ಸಿದ್ಧಾಂತವನ್ನು ಮಂಡಿಸಿದ. ಇದು ಸಹ ಕ್ವಾಂಟಮ್ ಸಿದ್ಧಾಂತಕ್ಕೆ ಬಹುಮುಖ್ಯ ಆಯಾಮ ನೀಡಿದ ಸಿದ್ಧಾಂತ. ಈ ಸಿದ್ಧಾಂತದ ಪ್ರಕಾರ ನೀವು ಯಾವುದೇ ವಸ್ತುವೊಂದರ ಸ್ಥಳ ಮತ್ತು ಅದರ ಆವೇಗ (ಆವೇಗವೆಂದರೆ ಆಂಗ್ಲಭಾಷೆಯಲ್ಲಿ ಮೊಮೆಂಟಮ್ ಎನ್ನುತ್ತಾರೆ. ಇದು ಆ ವಸ್ತುವಿನ ವೇಗ ಮತ್ತು ಅದರ ದ್ರವ್ಯರಾಶಿಗಳ ಗುಣಲಬ್ಧವಾಗಿದೆ) ಎರಡನ್ನೂ ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ. ನೀವು ಒಂದನ್ನು ನಿಖರವಾಗಿ ಹೇಳಿದರೆ ಇನ್ನೊಂದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಒಂದರಲ್ಲಿ ನಿಖರತೆ ಜಾಸ್ತಿಯಾದಂತೆ ಅದಕ್ಕೆ ತಕ್ಕುದಾಗಿ ಇನ್ನೊಂದರ ನಿಖರತೆ ಕಡಿಮೆಯಾಗುತ್ತದೆ. ಅಂದರೆ ಅದರ ಸ್ಥಾನವನ್ನು ನೀವು ನಿಖರವಾಗಿ ಹೇಳಿದರೆ ಆವೇಗವನ್ನು ನಿಖರವಾಗಿ ಹೇಳಲಾಗುವುದಿಲ್ಲ ಮತ್ತು ಆವೇಗವನ್ನು ನಿಖರವಾಗಿ ಹೇಳಿದರೆ ಸ್ಥಾನವನ್ನು ನಿಖರವಾಗಿ ಹೇಳಲಾಗುವುದಿಲ್ಲ. ನಾವು ದಿನನಿತ್ಯ ನೋಡುವ ದೊಡ್ಡದೊಡ್ಡ ವಸ್ತುಗಳ ವಿಷಯಕ್ಕೆ ಬಂದರೆ ಇದು ಅಷ್ಟೇನೂ ಮಹತ್ವದ್ದೆನ್ನಿಸುವುದಿಲ್ಲ. ಆದರೆ ಪರಮಾಣು ಮತ್ತು ಅದರೊಳಗಿನ ಉಪಕಣಗಳ ವಿಷಯಕ್ಕೆ ಬಂದಾಗ ಇದು ಅತ್ಯಂತ ಮಹತ್ವದ್ದೆನ್ನಿಸುತ್ತದೆ.
ಎರ್ವಿನ್ ಶ್ರೋಡಿಂಜರ್ ಎಂಬ ವಿಜ್ಞಾನಿ ಇದರ ಬಗ್ಗೆ ಸಾಕಷ್ಟು ಕೆಲಸ ಮಾಡಿದ. ಆತ ಕಂಡುಹಿಡಿದ “ವೇವ್ ಈಕ್ವೆಶನ್” ಅಥವಾ ಅಲೆ ಸಮೀಕರಣ ಎಂದು ಕರೆಯಬಹುದು. ಇದನ್ನು ಆತ ಕಲನಶಾಸ್ತ್ರ (ಕ್ಯಾಲ್ಕುಲಸ್) ನೆರವಿನಿಂದ ಕಂಡುಹಿಡಿದ. ಇದು ಒಂದು ವಸ್ತುವಿನ ಅಥವಾ ಯಾವುದೇ ಪರಮಾಣು ಉಪಕಣಗಳ ಕ್ವಾಂಟಮ್ ಸ್ಥಿತಿಯ ಬಗ್ಗೆ ನಮಗೆ ಮಾಹಿತಿಯನ್ನು ನೀಡುತ್ತದೆ ಮತ್ತು ಆ ಸ್ಥಿತಿ ಹೇಗೆ ಬದಲಾಗುತ್ತ ಹೋಗುತ್ತದೆ ಎಂಬ ಬಗೆಗೂ ಮಾಹಿತಿ ನೀಡುತ್ತದೆ. ಕ್ವಾಂಟಮ್ ಸ್ಥಿತಿ ಪರಮಾಣುವಿನೊಳಗೆ ಎಲೆಕ್ಟ್ರಾನ್ ಗಳ ಪಥ ಮತ್ತು ಆ ಪಥಗಳಲ್ಲಿ ಅವು ಸುತ್ತುತ್ತಿರುವ ರೀತಿ ಇತ್ಯಾದಿಗಳನ್ನು ಅವಲಂಬಿಸಿದೆ. ಇಲ್ಲಿ ಇನ್ನೊಬ್ಬ ವಿಜ್ಞಾನಿ ವೂಲ್ಫ್ ಗ್ಯಾಂಗ್ ಪೌಲಿಯ ಆಗಮನವಾಗುತ್ತದೆ.
ಪೌಲಿಯ ಪ್ರಕಾರ ಒಂದು ಪರಮಾಣುವಿನಲ್ಲಿ ಯಾವುದೇ ಎರಡು ಎಲೆಕ್ಟ್ರಾನ್ ಗಳ ಕ್ವಾಂಟಮ್ ಸ್ಥಿತಿ ಒಂದೇ ಆಗಿರಲು ಸಾಧ್ಯವಿಲ್ಲ. ಒಂದು ಯಾವುದೇ ಪರಮಾಣುವಿನ ಸುತ್ತ ಒಂದು ಪಥದಲ್ಲಿ ಗರಿಷ್ಠ ಎರಡು ಎಲೆಕ್ಟ್ರಾನ್ ಗಳು ಮಾತ್ರ ಇರಲು ಸಾಧ್ಯ ಮತ್ತು ಆ ಎರಡು ಎಲೆಕ್ಟ್ರಾನ್ ಗಳ ಸ್ವಭ್ರಮಣೆಯ ದಿಕ್ಕು ಪರಸ್ಪರ ಬದಲಾಗಿರುತ್ತದೆ. ಒಂದು ಗಡಿಯಾರದ ದಿಕ್ಕಿನಲ್ಲಿ ತಿರುಗಿದರೆ ಇನ್ನೊಂದು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಹೀಗೆ ಎರಡು ಎಲೆಕ್ಟ್ರಾನ್ ಗಳು ಬೇರೆಬೇರೆ ಕ್ವಾಂಟಮ್ ಸ್ಥಿತಿಯನ್ನು ಹೊಂದಿರುತ್ತವೆ. ಅವು ಒಂದೇ ಸ್ಥಿತಿಯನ್ನು ಹೊಂದಿರುವುದು ಸಾಧ್ಯವೇ ಇಲ್ಲ ಎಂಬುದು ಈ ಸಿದ್ಧಾಂತದ ತಿರುಳು.
ಲೂಯಿಸ್ ಡಿ ಬ್ರೂಗ್ಲಿ ಎಂಬ ಇನ್ನೊಬ್ಬ ವಿಜ್ಞಾನಿ “ಮ್ಯಾಟರ್ ವೇವ್” ಅಥವಾ ವಸ್ತುಗಳ ಅಲೆ ಎಂಬ ಇನ್ನೊಂದು ಸಿದ್ಧಾಂತವನ್ನು ಬಣ್ಣಿಸಿದ. ಅಂದರೆ ಬೆಳಕಿಗೆ ಮೊದಲಬಾರಿಗೆ ಹೇಗೆ ದ್ವಂದ್ವಪ್ರಕೃತಿಯನ್ನು ಆರೋಪಿಸಲಾಯಿತೋ ಹಾಗೆ ಎಲ್ಲ ವಸ್ತುಗಳಿಗೂ ಅಲೆಯ ಸ್ವರೂಪ ಇರುತ್ತದೆ ಎಂದು ಡಿ ಬ್ರೂಗ್ಲಿ ಹೇಳಿದ. ನಾವು ದಿನನಿತ್ಯ ನೋಡುವ ವಸ್ತುಗಳೆಲ್ಲ ಚಲಿಸುವಾಗ ಅಲೆಅಲೆಯಾಗಿ ಚಲಿಸುತ್ತದೆ ಎಂಬುದು ಇದರ ಅರ್ಥ. ಆದರೆ ನಾವು ಇದನ್ನು ಕಾಣಲಾರೆವು. ಏಕೆಂದರೆ ಈ ಅಲೆಗಳು ತೀರಾ ಅತ್ಯಲ್ಪ ಗಾತ್ರದವು. ಏಕೆಂದರೆ ಮೊದಲೇ ಹೇಳಿದಂತೆ ಪ್ಲಾಂಕ್ ನಿಯತಾಂಕ ಅತ್ಯಂತ ಚಿಕ್ಕದಾಗಿರುವುದೇ ಇದಕ್ಕೆ ಕಾರಣ. ಈ ವಸ್ತುಗಳ ಅಲೆ ಅಥವಾ ಮ್ಯಾಟರ್ ವೇವ್ ಗಳ ತರಂಗಾಂತರ ತುಂಬಾ ಕಡಿಮೆ. ಈ ಅಲೆಗಳ ತರಂಗಾಂತರ h/p ಎಂಬ ಭಾಗಲಬ್ಧಕ್ಕೆ ಸಮನಾಗಿರುತ್ತದೆ. ಇದರಲ್ಲಿ h ಎಂಬುದು ಪ್ಲಾಂಕ್ ನಿಯತಾಂಕ ಮತ್ತು p ಎಂಬುದು ಆವೇಗ. ಇಲ್ಲಿ h ನ ಬೆಲೆ ತುಂಬಾ ಕಡಿಮೆಯಾದ್ದರಿಂದ ಈ ಅಲೆಗಳ ತರಂಗಾಂತರವೂ ಕಡಿಮೆ. ಹಾಗಾಗಿಯೇ ಇದನ್ನು ಯಾರೂ ಗುರುತಿಸಲಾರರು. ಆದರೆ ಪರಮಾಣುವಿನ ಉಪಕಣಗಳ ವಿಷಯಕ್ಕೆ ಬಂದಾಗ ಅವುಗಳ ದ್ರವ್ಯರಾಶಿ ಅತ್ಯಂತ ಕಡಿಮೆಯಿರುವುದರಿಂದ ಅವುಗಳ ಆವೇಗವೂ ಕಡಿಮೆಯಾಗಿರುತ್ತದೆ. ಆದ್ದರಿಂದ ಈ ಭಾಗಲಬ್ಧವು ಒಂದು ಗಮನಾರ್ಹ ಸಂಖ್ಯೆಯಾಗಿರುತ್ತದೆ. ಎಲೆಕ್ಟ್ರಾನ್ ಗಳ ವಿಷಯದಲ್ಲಂತೂ ಈ ಅಲೆಗಳ ತರಂಗಾಂತರವನ್ನು ಅತ್ಯುತ್ತಮ ಉಪಕರಣಗಳ ಮೂಲಕ ಸುಲಭವಾಗಿ ಅಳೆಯಬಹುದು.
ಕ್ವಾಂಟಮ್ ಸಿದ್ಧಾಂತದಲ್ಲಿ ಇನ್ನೊಂದು ಪದ ಸಾಮಾನ್ಯವಾಗಿ ಕೇಳಿಬರುತ್ತದೆ. ಪ್ರಾಬೆಬಲಿಟಿ ಎಂಬ ಈ ಆಂಗ್ಲಭಾಷೆಯ ಪದದ ಅರ್ಥ ಸಂಬವನೀಯತೆ ಎಂದು. ಯಾವುದೇ ಒಂದು ಪರಮಾಣುವಿನ ಸುತ್ತ ಸುತ್ತುವ ಎಲೆಕ್ಟ್ರಾನ್ ಗಳ ಬಗೆಗೆ ಹೇಳುವಾಗ ಎಲೆಕ್ಟ್ರಾನ್ ಇಂಥಲ್ಲೇ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಅದಕ್ಕೆ ಅಲೆಯ ಪ್ರಕೃತಿ ಇರುವುದರಿಂದ ಮತ್ತು ಅದು ಪರಮಾಣು ಬೀಜದ ಸುತ್ತ ಸುತ್ತುತ್ತಲೇ ಇರುವುದರಿಂದ ಅದು ಒಂದು ಗೊತ್ತಾದ ಸ್ಥಳದಲ್ಲಿ ಇರುವ ಸಂಭವನೀಯತೆಯನ್ನು ಮಾತ್ರ ಭೌತಶಾಸ್ತ್ರದ ಪರಿಭಾಷೆಯಲ್ಲಿ ಹೇಳುತ್ತಾರೆಯೇ ಹೊರತು ಇಂಥಲ್ಲೇ ಇದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಭೂಮಿಯ ಮೇಲಿರುವ ಒಂದು ಪರಮಾಣು ಬೀಜದ ಸುತ್ತಲಿನ ಎಲೆಕ್ಟ್ರಾನ್ ಒಂದು ಚಂದ್ರನ ಮೇಲೂ ಇರಬಹುದು, ಆದರೆ ಆ ಸಂಭವನೀಯತೆ ತೀರಾ ನಗಣ್ಯ ಅಷ್ಟೆ. ದೂರ ಹೆಚ್ಚಿದಂತೆಲ್ಲ ಸಂಭವನೀಯತೆಯೂ ಕಡಿಮೆಯಾಗುತ್ತ ಬರುತ್ತದೆ. ಇದನ್ನೇ ನಮ್ಮ ನಿಜಜೀವನದಲ್ಲೂ ಅನ್ವಯಿಸುವುದಾದರೆ ನಾವಿಂದು ಯಾವುದೇ ಸ್ಥಳದಲ್ಲಿದ್ದರೂ ನಾನು ಇಂಥ ಸ್ಥಳದಲ್ಲಿದ್ದೇನೆ ಎಂದು ಹೇಳಲಾಗುವುದಿಲ್ಲ. ನನ್ನನ್ನು ಇಂಥ ಸ್ಥಳದಲ್ಲಿ ಕಾಣಬಹುದಾದ ಸಂಭವನೀಯತೆ ಜಾಸ್ತಿ ಎನ್ನಬೇಕಷ್ಟೆ! ಮೇಲ್ನೋಟಕ್ಕೆ ಇವೆಲ್ಲ ಹಾಸ್ಯಾಸ್ಪದವಾಗಿ ಕಂಡರೂ ಇದು ಭೌತಶಾಸ್ತ್ರದ ನಿಯಮಗಳ ಪ್ರಕಾರ ಸರಿ.
ನಿಮ್ಮನ್ನು ಒಂದು ಕೋಣೆಯಲ್ಲಿ ಕೂಡಿಹಾಕಲಾಗಿದೆ ಎಂದುಕೊಳ್ಳಿ. ಅಲ್ಲಿಂದ ಹೊರಬರಲು ನೀವೇನು ಮಾಡಬೇಕು? ಸರಳವಾದ ಉತ್ತರವೆಂದರೆ ಹೊರಗಿನಿಂದ ಕೋಣೆಯ ಬಾಗಿಲನ್ನು ತೆರೆಯಬೇಕು ಮತ್ತು ನೀವು ಹೊರಕ್ಕೆ ಬರಬೇಕು. ಅದರ ಹೊರತು ನಿಮಗಿರುವ ಒಂದೇ ದಾರಿಯೆಂದರೆ ಗೋಡೆ ಅಥವಾ ನೆಲವನ್ನು ಕೊರೆದು ಹೊರಬರುವುದು. ಆದರೆ ಕೊರೆಯಲು ನಿಮ್ಮ ಬಳಿ ಯಾವುದೇ ಸಾಧನ ಇಲ್ಲ. ಹಾಗಿದ್ದರೆ ನೀವೇನು ಮಾಡಬಹುದು? ಹೊರಗಿನವರು ಯಾರಾದರೂ ಬಂದು ಬಿಡಿಸುವ ತನಕ ಒಳಗಡೆಯೇ ಶತಪಥ ಸುತ್ತುವುದನ್ನು ಹೊರತುಪಡಿಸಿದರೆ ಬೇರೇನೂ ಮಾಡಲು ಸಾಧ್ಯವಿಲ್ಲವೆಂದು ನೀವು ಯೋಚಿಸಬಹುದು. ಆದರೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ ಇಂಥದ್ದೊಂದು ಸಾಧ್ಯತೆ ಭೌತಶಾಸ್ತ್ರದ ನಿಯಮಗಳ ಪ್ರಕಾರ ಇದೆ. ನೀವು ನಿಮ್ಮ ಜೈಲಿನ ಗೋಡೆಗೆ ಸತತವಾಗಿ ಢಿಕ್ಕಿ ಹೊಡೆಯಬೇಕು. ಕೊನೆಗೊಮ್ಮೆ ನೀವು ಗೋಡೆಯ ಮೂಲಕ ತೂರಿಕೊಂಡು ಹೊರಕ್ಕೆ ಬರುತ್ತೀರಿ! ಗೋಡೆ ಹಾಗೆಯೇ ಇರುತ್ತದೆ. ನೀವೂ ಕೂಡ ಇದ್ದಂತೆಯೇ ಇರುತ್ತೀರಿ. ಆದರೆ ನೀವು ಗೋಡೆಯ ಮೂಲಕ ತೂರಿಕೊಂಡು ಹೊರಕ್ಕೆ ಬಂದಿರುತ್ತೀರಿ!
ಕ್ವಾಂಟಮ್ ಸಿದ್ಧಾಂತ ಇಂಥದೇ ಹಲವು ನಂಬಲಸಾಧ್ಯವಾದ ಸಾಧ್ಯತೆಗಳ ಮೊತ್ತ. ಹಾಗೆಂದು ಇದನ್ನೆಲ್ಲ ಕಟ್ಟುಕಥೆಯೆಮದು ಭಾವಿಸಬೇಡಿ. ಇದೆಲ್ಲ ಪರಮಾಣುಗಳ ಉಪಕಣಗಳಲ್ಲಿ ಪರೀಕ್ಷಿಸಿ ಸಾಧ್ಯವೆಂದು ಕಂಡುಕೊಂಡ ಪರಿಣಾಮಗಳೇ ಆಗಿವೆ. ಹಾಗೆಂದು ನೀವು ತಪ್ಪಿಸಿಕೊಳ್ಳಬಹುದೆಂದು ಗೋಡೆಗೆ ಢಿಕ್ಕಿ ಹೊಡೆಯುತ್ತ ಹೋದರೆ ತಲೆ ಒಡೆದುಕೊಂಡು ಸಾಯಬೇಕಾದೀತು. ಹಾಗಾದರೆ ಭೌತಶಾಸ್ತ್ರ ಹೇಳುವುದು ಸುಳ್ಳೇ? ಖಂಡಿತಾ ಸುಳ್ಳಲ್ಲ, ಆದರೆ ಹಾಗೆ ಗೋಡೆಯಿಂದ ತೂರಿಕೊಂಡು ಹೊರಬರಲು ಹತ್ತಾರು, ನೂರಾರು, ಸಾವಿರಾರು, ಅಷ್ಟೇ ಏಕೆ ಒಂದು ಕೋಟಿ ಸಲ ಗೋಡೆಗೆ ಗುದ್ದಿದರೂ ಹೊರಬರಲು ಸಾಧ್ಯವಿಲ್ಲ. ಅದಕ್ಕೆ ಹಲವು ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಸಲ ಗುದ್ದಬೇಕಾಗುತ್ತದೆ! ನಮಗ್ಯಾರಿಗೂ ಅಷ್ಟು ಶಕ್ತಿಯಾಗಲೀ ಆಯಸ್ಸಾಗಲೀ ಇಲ್ಲವಾದ್ದರಿಂದ ಜಗತ್ತಿನಾದ್ಯಂತ ಕೈದಿಗಳನ್ನು ನಿಶ್ಚಿಂತೆಯಿಂದ ಕೂಡಿಹಾಕುವುದು ಕಾನೂನು ಪಾಲಕರಿಗೆ ಸಾಧ್ಯವಾಗಿದೆ!
ಕ್ವಾಂಟಮ್ ಸಿದ್ಧಾಂತವನ್ನು ಅರ್ಥೈಸಿಕೊಳ್ಳಬಯಸುವವರಿಗೆ ಅತ್ಯುತ್ತಮ ಮಾರ್ಗದರ್ಶಕವಾಗಬಲ್ಲ ಪುಸ್ತಕವೆಂದರೆ ಜಾರ್ಜ್ ಗ್ಯಾಮೋ ಬರೆದ “ಮಿಸ್ಟರ್ ಟಾಮ್ಕಿನ್ಸ್ ನ್ಯೂ ವರ್ಲ್ಡ್ಸ್” ಪುಸ್ತಕ. ಅದರಲ್ಲಿ ಕಥಾನಾಯಕ ಟಾಮ್ಕಿನ್ಸ್ ಕ್ವಾಂಟಮ್ ಕಾಡಿಗೆ ಭೇಟಿ ಕೊಡುತ್ತಾನೆ. ಮತ್ತೊಮ್ಮೆ ಕ್ವಾಂಟಮ್ ಸ್ನೂಕರ್ ಆಡುವವರನ್ನು ಕಾಣುತ್ತಾನೆ. ಟಾಮ್ಕಿನ್ಸ್ ತನ್ನ ಕನಸಿನಲ್ಲಿ ಭೇಟಿಯಾಗುವ ಆ ಪ್ರಪಂಚದಲ್ಲಿ ಪ್ಲಾಂಕ್ ನಿಯತಾಂಕದ ಬೆಲೆ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ನಮ್ಮ ಪ್ರಪಂಚದಲ್ಲಿ ನಾವು ಕೇವಲ ಪರಮಾಣು ಉಪಕಣಗಳಲ್ಲಿ ಮಾತ್ರ ಕಾಣಬಹುದಾದ ಪರಿಣಾಮಗಳನ್ನೆಲ್ಲ ಟಾಮ್ಕಿನ್ಸ್ ಪ್ರತಿಯೊಂದು ವಸ್ತು ಮತ್ತು ಪ್ರಾಣಿ, ಪಕ್ಷಿ, ಮನುಷ್ಯ ಹೀಗೆ ಎಲ್ಲದರಲ್ಲೂ ಕಾಣುತ್ತಾನೆ. ಅದೇ ಈ ಪ್ರಪಂಚದ ವೈಶಿಷ್ಟ್ಯ. ಇದನ್ನು ಗ್ಯಾಮೋ ಹೇಗೆ ಮನಮುಟ್ಟುವಂತೆ ವಿವರಿಸಿದ್ದಾನೆಂದರೆ ಅಲ್ಪಸ್ವಲ್ಪ ಭೌತಶಾಸ್ತ್ರದ ಜ್ಞಾನವಿರುವವರಿಗೂ ಸುಲಭವಾಗಿ ಅರ್ಥವಾಗುವಂತಿದೆ. ಕಥೆಯ ಮೂಲಕ ಭೌತಶಾಸ್ತ್ರದ ಪರಿಕಲ್ಪನೆಗಳನ್ನು ವಿವರಿಸುವ ಕಲೆಯಲ್ಲಿ ಗ್ಯಾಮೋಗೆ ಸರಿಸಾಟಿಯಾದವನು ಮತ್ತೊಬ್ಬನಿಲ್ಲ.
ಕ್ವಾಂಟಮ್ ಸಿದ್ಧಾಂತವು ಇಂಬು ಭೌತಶಾಸ್ತ್ರದ ಎಲ್ಲ ಪರಿಕಲ್ಪನೆಗಳಲ್ಲೂ ಹಾಸುಹೊಕ್ಕಾಗಿದೆ. ಐನ್ ಸ್ಟೀನ್ ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳಲಾದ ಗುರುತ್ವ ಬಲವನ್ನೂ ಸಹ ಕ್ವಾಂಟಮ್ ಸಿದ್ಧಾಂತದ ನೆಲೆಗಟ್ಟಿನಲ್ಲೇ ಅರ್ಥೈಸಿಕೊಳ್ಳಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕ್ವಾಂಟಮ್ ಆಫ್ ಸ್ಪೇಸ್ ಮತ್ತು ಕ್ವಾಂಟಮ್ ಆಫ್ ಟೈಮ್ ಎಂಬ ಎರಡು ಹೊಸ ಪರಿಕಲ್ಪನೆಗಳೂ ಬಂದಿವೆ. ಹಾಗೆಂದರೆ ಸಮಯವನ್ನು ಚಿಕ್ಕಚಿಕ್ಕ ಭಾಗಗಳಾಗಿ ವಿಭಜಿಸುತ್ತ ಹೋದರೆ ಒಮ್ಮೆ ನಮಗೆ ಇದಕ್ಕಿಂತ ಚಿಕ್ಕ ಸಮಯ ಸಾಧ್ಯವಿಲ್ಲ ಎಂಬಂಥ ಮಿತಿಗೆ ತಲುಪುತ್ತೇವೆ. ಅದನ್ನೇ ಸಮಯದ ಒಂದು ಯುನಿಟ್ ಅಥವಾ ಮಾನ ಎನ್ನಬಹುದು. ಇದು ವಿಶ್ವದಲ್ಲಿ ಸಾಧ್ಯವಿರುವ ಅತಿಚಿಕ್ಕ ಸಮಯ ಎನ್ನಬಹುದು. ಅಂದರೆ ಅದಕ್ಕಿಂತ ಕಡಿಮೆ ಸಮಯದ ಅಳತೆ ಈ ವಿಶ್ವದಲ್ಲಿ ಇಲ್ಲವೇ ಇಲ್ಲ ಎಂಬುದು ಇದರ ತಾತ್ಪರ್ಯ. ಇದನ್ನು ಪ್ಲಾಂಕ್ ಸಮಯ ಎಂದೂ ಗುರುತಿಸುತ್ತಾರೆ. ಈ ಸಮಯ 5.39x10-44  ಸೆಕೆಂಡ್ ಗಳು. ಈ ಅತ್ಯಲ್ಪ ಕಾಲವನ್ನು ನಮ್ಮಿಂದ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ.

ಒಟ್ಟಿನಲ್ಲಿ ಕ್ವಾಂಟಂ ಸಿದ್ಧಾಂತವು ಇಂದು ಭೌತಶಾಸ್ತ್ರದ ಪರಿಕಲ್ಪನೆಗಳನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಸಂಸ್ಕೃತದಲ್ಲಿ ಒಂದು ಮಾತಿದೆ. “ಕಾದಂಬರೀ ರಸಾಜ್ಞಾನಾಂ ಆಹಾರೋಪಿ ನ ರೋಚತೇ” ಎಂದು. ಹಾಗೆಂದರೆ ಬಾಣಭಟ್ಟನ ಕಾದಂಬರಿಯೆಂಬ ಮಹಾಕಾವ್ಯವನ್ನು ಓದಿದವನಿಗೆ ಅದರ ಮುಂದೆ ಊಟವೂ ಕೂಡ ರುಚಿಸುವುದಿಲ್ಲ ಎಂದು. ಕಾದಂಬರಿಯ ಸೌಂದರ್ಯವನ್ನು ವರ್ಣಿಸಲು ಇದೊಂದೇ ಸಾಲು ಸಾಕು. ಒಂದು ವೇಳೆ ಭೌತಶಾಸ್ತ್ರಜ್ಞರಿಗೇನಾದರೂ ಸಂಸ್ಖೃತ ಗೊತ್ತಿದ್ದರೆ ಅವರು “ಕ್ವಾಂಟಂ ಫಿಸಿಕ್ಸ್ ರಸಾಜ್ಞಾನಾಂ ಆಹಾರೋಪಿ ನ ರೋಚತೇ” ಎಂದು ಬದಲಾಯಿಸುತ್ತಿದ್ದರೇನೋ?

5 comments:

  1. ಕನ್ನಡ ಭಾಷೆಯಲ್ಲಿ ಈ ವಿಷಯದ ಕುರಿತಾಗಿ ಒಂದು ಪುಸ್ತಕ ಹೊರ ತನ್ನಿರಿ

    ReplyDelete
    Replies
    1. Kannadadalli eegagale ee bagge pusthaka barediddene sir...

      Delete