Wednesday 5 October 2016

ಪುಸ್ತಕಲೋಕದಲ್ಲಿ ನನ್ನ ಮೊದಲ ಹೆಜ್ಜೆ: ಬಾಹ್ಯಾಕಾಶದ ಅದ್ಭುತಗಳು

ಪುಸ್ತಕಲೋಕದಲ್ಲಿ ನನ್ನ ಮೊದಲ ಹೆಜ್ಜೆ: ಬಾಹ್ಯಾಕಾಶದ ಅದ್ಭುತಗಳು
ಭೌತಶಾಸ್ತ್ರ ಚಿಕ್ಕಂದಿನಿಂದಲೂ ನನ್ನ ಆಸಕ್ತಿಯ ವಿಷಯವಾಗಿತ್ತೇ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ ಎರಡೂ ಆಗಿತ್ತು. ಏಕೆಂದರೆ ಭೌತಶಾಸ್ತ್ರದಲ್ಲಿ ಕೆಲವೊಂದು ವಿಷಯಗಳು ನನಗೆ ತಣಿಯದ ಕುತೂಹಲ, ಆಸಕ್ತಿಯನ್ನು ಹುಟ್ಟುಹಾಕಿದ್ದರೆ ಇನ್ನೂ ಕೆಲವೊಂದು ವಿಷಯಗಳು ನೀರಸವೆನ್ನಿಸುತ್ತಿತ್ತು. ಅತ್ಯಂತ ಆಸಕ್ತಿ ಹುಟ್ಟಿಸಿದ್ದ ಅಂಶಗಳೆಂದರೆ ಖಗೋಳವಿಜ್ಞಾನದ ವಿಷಯಗಳು. ಗ್ರಹ, ನಕ್ಷತ್ರ ಮತ್ತಿತರ ಕಾಯಗಳ ಬಗೆಗೆ ಇನ್ನಿಲ್ಲದ ಆಸಕ್ತಿ. ರಾತ್ರಿಯ ವೇಳೆ ಆಕಾಶವನ್ನು ವೀಕ್ಷಿಸುವುದು ನನ್ನ ಅತ್ಯಂತ ಪ್ರಿಯವಾದ ಹವ್ಯಾಸಗಳಲ್ಲೊಂದಾಗಿತ್ತು. ಗಣಿತ ಮತ್ತು ಭೌತಶಾಸ್ತ್ರ ಎರಡರಲ್ಲೂ ಆಸಕ್ತಿಯಿದ್ದ ನನಗೆ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಸಿದ್ಧಾಂತಗಳ ಬಗೆಗೆ ತೀರದ ಕುತೂಹಲವಿತ್ತು. ಜಾರ್ಜ್ ಗ್ಯಾಮೋ, ಸ್ಟೀಫನ್ ಹಾಕಿಂಗ್, ಮಿಷಿಯೋ ಕಾಕು ಮುಂತಾದವರ ಪುಸ್ತಕಗಳು ನನ್ನ ಓದಿನ ದಾಹವನ್ನು ತಣಿಸುತ್ತಿದ್ದವು. ಬಹಳ ಕಾಲ ಕೇವಲ ಓದುತ್ತಲೇ ಕಳೆದ ನನಗೆ ಇದನ್ನೆಲ್ಲ ಏಕೆ ನನ್ನದೇ ಆದ ಶಬ್ದಗಳಲ್ಲಿ ಬರೆಯಬಾರದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು. ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಬರೆಯುವುದು ಸ್ವಲ್ಪ ಕಷ್ಟ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಾಪಕವಾಗಿದ್ದುದನ್ನು ಕಂಡಿದ್ದೆ. ಹಾಗಾಗಿ ಅಂಥ ಅಭಿಪ್ರಾಯವನ್ನು ಸುಳ್ಳಾಗಿಸಬೇಕೆಂಬ ಗುರಿ ನನ್ನದಾಗಿತ್ತು. ನಿಧಾನವಾಗಿ ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ. ನಂತರ ಪುಸ್ತಕವನ್ನು ಪ್ರಕಟಿಸುವ ಯೋಚನೆಯೂ ನನ್ನ ಮನಸ್ಸಿನಲ್ಲಿ ಮೂಡಿತು. ಆ ಯೋಚನೆಯ ಫಲವೇ "ಬಾಹ್ಯಾಕಾಶದ ಅದ್ಭುತಗಳು".
ಭೌತಶಾಸ್ತ್ರದಲ್ಲಿ ಏನನ್ನಾದರೂ ಅರ್ಥೈಸಿಕೊಳ್ಳಬೇಕಾದರೆ ಗಣಿತದ ಜ್ಞಾನ ಅತ್ಯಗತ್ಯ. ರಸಾಯನಶಾಸ್ತ್ರ, ಜೀವಶಾಸ್ತ್ರ ಅಥವಾ ಬೇರೆ ಕೆಲವು ವಿಜ್ಞಾನದ ಶಾಖೆಗಳನ್ನು ಗಣಿತದ ಪ್ರಾಥಮಿಕ ಜ್ಞಾನವಿದ್ದರೂ ಸಾಕು, ಅರ್ಥೈಸಿಕೊಳ್ಳಬಹುದು. ಆದರೆ ಭೌತಶಾಸ್ತ್ರವನ್ನು ಅರ್ಥೈಸಿಕೊಳ್ಳಬೇಕಾದರೆ ಗಣಿತದಲ್ಲಿ ಹೆಚ್ಚಿನ ಜ್ಞಾನ ಅಗತ್ಯ. ಆದ್ದರಿಂದ ಪುಸ್ತಕದ ಆರಂಭದಲ್ಲಿ ಪೈ ಮತ್ತು ಲಘುಗಣಕ (ಲಾಗರಿದಮ್ಸ್) ಬಗೆಗೆ ಎರಡು ಅಧ್ಯಾಯಗಳನ್ನು ಬರೆದಿದ್ದೇನೆ.
ವಿಜ್ಞಾನ ಬೆಳೆಯುವುದೇ ವಿಜ್ಞಾನಿಗಳಿಂದ. ಜಗತ್ತಿನಾದ್ಯಂತ ವಿಜ್ಞಾನದ ಬೆಳವಣಿಗೆಗಾಗಿ ತಮ್ಮ ತನು, ಮನ, ಧನಗಳನ್ನೇ ಸಮರ್ಪಿಸಿದ ವಿಜ್ಞಾನಿಗಳ ಸಂಖ್ಯೆ ದೊಡ್ಡದಿದೆ. ಅಂದಿಗೂ ಇಂದಿಗೂ ವಿಜ್ಞಾನಿಗಳ ಉದ್ದೇಶವೊಂದೇ – ಸತ್ಯವನ್ನು ಸಾರುವುದು. ಅದಕ್ಕಾಗಿ ಯಾವ ಬೆಲೆಯನ್ನಾದರೂ ತೆರಲು ಅವರು ಸಿದ್ಧರಿದ್ದರು. ಭೂಮಿಯ ಸುತ್ತ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು ಮತ್ತಿತರ ಎಲ್ಲ ಆಕಾಶಕಾಯಗಳೂ ಸುತ್ತುತ್ತವೆ ಎಂಬ ಟಾಲೆಮಿಯ ಭೂಕೇಂದ್ರ ಸಿದ್ಧಾಂತವನ್ನು ತಪ್ಪೆಂದು ತೋರಿಸಿಕೊಟ್ಟಾಗ ವಿಜ್ಞಾನಿಗಳಿಗೆ ಎದುರಾದ ಪ್ರತಿರೋಧ ಚಿಕ್ಕದಲ್ಲ. ಹಾಗೆ ಅಂಥ ಅನೇಕ ಸತ್ಯಗಳನ್ನು ನಿರ್ಭಯವಾಗಿ ಹೇಳಿದ ತಪ್ಪಿಗಾಗಿ (?) ಜೀವಂತವಾಗಿ ಸುಡಲ್ಪಟ್ಟ ಜಿಯೋರ್ಡನೋ ಬ್ರೂನೋ ಇವತ್ತಿಗೂ ವಿಜ್ಞಾನದ ಹುತಾತ್ಮನೆಂದೇ ಗುರುತಿಸಲ್ಪಡುತ್ತಿದ್ದಾನೆ. ಒಂದು ಅಧ್ಯಾಯವನ್ನು ಅವನಿಗೆ ನುಡಿನಮನ ಸಲ್ಲಿಸಲಿಕ್ಕಾಗಿ ಮೀಸಲಿಟ್ಟಿದ್ದೇನೆ.
ಅತ್ಯುತ್ತಮ ವಿಜ್ಞಾನಿಗಳೆಲ್ಲ ಅತ್ಯುತ್ತಮ ವಿಜ್ಞಾನ ಶಿಕ್ಷಕರಾಗುತ್ತಾರೆ ಎನ್ನುವಂತಿಲ್ಲ. ಏಕೆಂದರೆ ವಿಜ್ಞಾನದ ವಿಷಯಗಳನ್ನು ಅರ್ಥಮಾಡಿಕೊಳ್ಳುವುದೇ ಬೇರೆ, ಅದನ್ನೆಲ್ಲ ಇನ್ನೊಬ್ಬರಿಗೆ ಅರ್ಥವಾಗುವಂತೆ ವಿವರಿಸಿ ಹೇಳುವುದು ಬೇರೆ. ಎರಡೂ ಪ್ರತಿಭೆಗಳನ್ನು ಹೊಂದಿರುವವರು ಜಗತ್ತಿನಲ್ಲಿ ಕೆಲವೇ ಕೆಲವರು. ಅಂಥವರಲ್ಲೊಬ್ಬರು ಜಾರ್ಜ್ ಗ್ಯಾಮೋ. ಸರ್ ಆರ್ಥರ್ ಕಾನನ್ ಡಾಯ್ಲ್ ಹೇಗೆ ಶೆರ್ಲಾಕ್ ಹೋಮ್ಸ್ ಮೂಲಕ ಪರಿಚಿತನೋ, ನಮ್ಮ ಆರ್.ಕೆ.ಲಕ್ಷ್ಮಣ್ ಹೇಗೆ ಶ್ರೀಸಾಮಾನ್ಯನಿಂದ ಪರಿಚಿತರೋ, ಹಾಗೆ ಜಾರ್ಜ್ ಗ್ಯಾಮೋ ಮಿಸ್ಟರ್ ಟಾಮ್ಕಿನ್ಸ್ ಎಂಬ ಪಾತ್ರದಿಂದ ಚಿರಪರಿಚಿತರು. ಬ್ಯಾಂಕೊಂದರಲ್ಲಿ ಕ್ಲರ್ಕ್ ಆಗಿದ್ದ ಟಾಮ್ಕಿನ್ಸ್ ತನ್ನ ವಿಜ್ಞಾನದ ಬಗೆಗಿನ ಕುತೂಹಲ ಮತ್ತು ಆಸಕ್ತಿಯಿಂದಲೇ ಗಮನಸೆಳೆಯುತ್ತಾನೆ. ಟಾಮ್ಕಿನ್ಸ್ ಕಥೆ ಹೇಳುತ್ತ ಅದರ ಮೂಲಕ ಗ್ಯಾಮೋ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಂ ಸಿದ್ಧಾಂತಗಳನ್ನು ವಿವರಿಸುತ್ತಾರೆ. ಅಂಥ ಗ್ಯಾಮೋ ಪರಿಚಯಕ್ಕಾಗಿ ಒಂದು ಅಧ್ಯಾಯವನ್ನು ಮೀಸಲಿಡಲಾಗಿದೆ.
ನಗರಗಳಲ್ಲಿ ಇಂದು ಜನಕ್ಕೆ ಕತ್ತಲೆ ಎಂದರೇನೆಂದೇ ತಿಳಿದಿಲ್ಲ. ಇದಕ್ಕೆ ಕಾರಣ ಇಪ್ಪತ್ನಾಲ್ಕು ತಾಸೂ ಜಗಮಗಿಸುವ ವಿದ್ಯುದ್ದೀಪಗಳು. ನಮ್ಮ ಹಳ್ಳಿಗಳಲ್ಲಿ ಈಗಲೂ ವಿದ್ಯುತ್ ಕಡಿತವೆಂಬುದು ಸರ್ವೇಸಾಮಾನ್ಯ ಹಾಗೂ ನಾವೂ ಅದನ್ನು ಅತ್ಯಂತ ಸಹಜವಾಗಿಯೇ ಸ್ವೀಕರಿಸಿದ್ದೇವೆ. ವಿದ್ಯುತ್ತಿಲ್ಲದ ಅಂಥ ರಾತ್ರಿಯೊಂದರಲ್ಲಿ ಮನೆಯಿಂದ ಹೊರಬಂದು ನಿಂತರೆ ಸುತ್ತೆಲ್ಲ ಕೈಗೆ ಮೆತ್ತಿಕೊಳ್ಳುವಂಥ ಗಾಢಾಂಧಕಾರ. ಆ ಕತ್ತಲೆಯಲ್ಲಿ ಸುತ್ತಲಿನ ಕಾಡಿನಲ್ಲಿ ಕೂಗುತ್ತಿರುವ ನೂರಾರು ಕ್ರಿಮಿಕೀಟ ಮತ್ತಿತರ ನಿಶಾಚರಿಗಳ ಕೂಗನ್ನು ಕೇಳುವುದೇ ಒಂದು ಅನಿರ್ವಚನೀಯ ಆನಂದ. ಇವತ್ತು ನಗರಜೀವಿಗಳಿಂದ ಅಂಥ ಆನಂದವನ್ನು ಕಸಿದುಕೊಳ್ಳುತ್ತಿರುವ ಬೆಳಕಿನ ಮಾಲಿನ್ಯದ ಬಗ್ಗೆ ಒಂದು ಅಧ್ಯಾಯದಲ್ಲಿ ಬರೆದಿದ್ದೇನೆ.
ಜಗತ್ತನ್ನು ಇಂದು ಕಾಡುತ್ತಿರುವ ಗಂಭೀರ ಸಮಸ್ಯೆಗಳ ಪೈಕಿ ಶಕ್ತಿಯ ಬಿಕ್ಕಟ್ಟೂ ಒಂದು. ಇದಕ್ಕೆ ಪರಿಹಾರವಾದ ಸೌರಶಕ್ತಿ ಅತ್ಯಂತ ಸುಲಭವಾಗಿ ಲಭ್ಯವಾಗುವ ಶಕ್ತಿ. ಆದರೆ ಅದನ್ನು ಬಳಸಲು ಬೇಕಾದ ಉಪಕರಣಗಳು ದುಬಾರಿಯಾಗಿರುವುದೇ ಅದಕ್ಕಿರುವ ಹಿನ್ನಡೆ. ಅದಕ್ಕೆ ಬದಲಾಗಿ ಸೂರ್ಯನಲ್ಲಿ ಉತ್ಪಾದನೆಯಾಗುವಂಥ ಶಕ್ತಿಯನ್ನು ಭೂಮಿಯ ಮೇಲೆ ನಾವೇ ಉತ್ಪಾದಿಸುವಂತಾದರೆ? ಅದಕ್ಕೆ ಸೂರ್ಯನಲ್ಲಿರುವಷ್ಟೇ ಅಪಾರವಾದ ಉಷ್ಣತೆ ಬೇಕಾಗುತ್ತದೆ ಎಂಬ ಕಾರಣದಿಂದಲೇ ಅದನ್ನು ಭೂಮಿಯ ಮೇಲೆ ಇಂದು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಹಾಗಿದ್ದರೆ ಇದಕ್ಕೇನೂ ಪರಿಹಾರವೇ ಇಲ್ಲವೇ? ನಿರಂತರ ಆಶಾವಾದಿಗಳಾದ ವಿಜ್ಞಾನಿಗಳು ಸೂರ್ಯನಲ್ಲಾಗುತ್ತಿರುವ ಜಲಜನಕದ ಬೈಜಿಕ ಸಮ್ಮಿಳನ ಪ್ರಕ್ರಿಯೆಯನ್ನು ಭೂಮಿಯ ಮೇಲೂ ಸಾಧಿಸಲು ಸಾಧ್ಯವಿದೆಯಂದೇ ನಂಬಿದ್ದಾರೆ. ಹಾಗಾದರೆ ನಾವಿಂದು ಇದರ ಸಂಶೋಧನೆಯಲ್ಲಿ ಎಲ್ಲಿಯವರೆಗೆ ತಲುಪಿದ್ದೇವೆ? ಇದನ್ನು ಸಾಧಿಸಲು ನಮ್ಮಿಂದ ಎಂದಾದರೂ ಸಾಧ್ಯವಾಗಬಹುದೇ? ಇದರ ಬಗ್ಗೆ "ಜಲಜನಕ: ಭವಿಷ್ಯದ ಅಕ್ಷಯ ಶಕ್ತಿಭಂಡಾರ?" ಎಂಬ ಅಧ್ಯಾಯದಲ್ಲಿ ಚರ್ಚಿಸಿದ್ದೇನೆ.
ತನ್ನ ತಲೆಯ ಮೇಲೆ ಬಿದ್ದ ಸೇಬುಹಣ್ಣಿನಿಂದಾಗಿ ನ್ಯೂಟನ್ ಗುರುತ್ವದ ಬಗ್ಗೆ ಯೋಚಿಸಿ ಗುರುತ್ವ ನಿಯಮವನ್ನು ಪ್ರತಿಪಾದಿಸಿದ ಎಂದು ನಂಬಲಾಗಿದೆ. ಸುಮಾರು ಎರಡು ಶತಮಾನಗಳಿಗೂ ಹೆಚ್ಚುಕಾಲ ಅವನ ಸಿದ್ಧಾಂತ ಪರಿಪೂರ್ಣವಾದದ್ದು ಎಂದೇ ನಂಬಲಾಗಿತ್ತು, ಜರ್ಮನಿಯ ಪೇಟೆಂಟ್ ಆಫಿಸೊಂದರಲ್ಲಿ ಕೆಲಸಕ್ಕಿದ್ದ ಆಲ್ಬರ್ಟ್ ಐನ್ ಸ್ಟೀನ್ ಎಂಬ ಗುಮಾಸ್ತ ರಂಗಪ್ರವೇಶ ಮಾಡುವತನಕ! 1905ರಲ್ಲಿ ಸಾಪೇಕ್ಷತಾ ಸಿದ್ಧಾಂತವನ್ನು ಮೊದಲಬಾರಿಗೆ ಪ್ರತಿಪಾದಿಸಿದ ಐನ್ ಸ್ಟೀನ್ ಹತ್ತು ವರ್ಷಗಳ ಬಳಿಕ ಗುರುತ್ವವನ್ನೂ ಸಾಪೇಕ್ಷತೆಯ ನೆಲೆಗಟ್ಟಿನಲ್ಲಿ ವಿವರಿಸುತ್ತ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ಥಿಯರಿ ಆಫ್ ರಿಲೇಟಿವಿಟಿ) ವನ್ನು ಪ್ರತಿಪಾದಿಸಿದ. ಈ ಸಿದ್ಧಾಂತ ನಾವು ಇಂದು ಜಗತ್ತನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದೆ ಎಂಬುದು ಕ್ಲೀಷೆಯಾದರೂ ಸತ್ಯಸ್ಯ ಸತ್ಯ. ನಾವು ಏನೂ ಇಲ್ಲದ ಶೂನ್ಯವೆಂದು ಭಾವಿಸಿದ್ದ ಆಕಾಶ ವಾಸ್ತವವಾಗಿ ಏನೂ ಇಲ್ಲದ್ದಲ್ಲ, ಎಲ್ಲವೂ ಅದರಲ್ಲೇ ಇದೆ, ಆಕಾಶ-ಕಾಲಗಳ ನಾಲ್ಕು ಆಯಾಮಗಳ ವಿಶ್ವದಲ್ಲಿ ನಾವೆಲ್ಲ ಬದುಕಿದ್ದೇವೆ ಸತ್ಯದರ್ಶನವನ್ನು ಐನ್ ಸ್ಟೀನ್ ಮಾಡಿಸಿದ. ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸಲಾಗದ ಈ ಕಾಲ, ಆಕಾಶ, ಸಾಪೇಕ್ಷತಾ ಸಿದ್ಧಾಂತ ಮತ್ತು ಗುರುತ್ವಗಳ ಬಗೆಗೆ ವಿವರಿಸಲೆಂದೇ ನಾಲ್ಕು ಅಧ್ಯಾಯಗಳನ್ನು ಮೀಸಲಾಗಿಟ್ಟಿದ್ದೇನೆ. ಅನೇಕ ವೈಜ್ಞಾನಿಕ ಕಥೆಗಳ ವಸ್ತುವಾಗಿರುವ ಕಾಲಪ್ರಯಾಣದ ಬಗೆಗೂ ಸವಿಸ್ತಾರವಾಗಿ ಒಂದು ಅಧ್ಯಾಯದಲ್ಲಿ ಚರ್ಚಿಸಿದ್ದೇನೆ. ಇದರ ಬಗ್ಗೆ ಚರ್ಚಿಸುವಾಗ ಯಾರ ಕಣ್ಣಿಗೂ ಕಾಣದ, ಆದರೆ ಎಲ್ಲರಲ್ಲೂ ಅಗಾಧವಾದ ಕುತೂಹಲವನ್ನು ಹುಟ್ಟುಹಾಕಿರುವ ಕೃಷ್ಣರಂಧ್ರಗಳ ಬಗೆಗೂ ಚರ್ಚಿಸಿದ್ದೇನೆ.
ಗುರುತ್ವ ಮತ್ತು ಸಾಪೇಕ್ಷತಾ ಸಿದ್ಧಾಂತಗಳು ಜಗತ್ತಿನ ಭಾರೀ ಕಾಯಗಳಾದ ನಕ್ಷತ್ರ, ಗ್ಯಾಲಕ್ಸಿ ಇತ್ಯಾದಿಗಳ ಬಗೆಗೆ ಸಂಬಂಧಿಸಿದ್ದಾದರೆ ಅಣು, ಪರಮಾಣು ಮತ್ತು ಅವುಗಳೊಳಗಿನ ಸೂಕ್ಷ್ಮಾತಿಸೂಕ್ಷ್ಮ ಕಣಗಳ ಬಗೆಗೆ ಚರ್ಚಿಸುವಾಗ ನಮಗೆ ನೆರವಾಗುವ ಸಿದ್ಧಾಂತ ಕ್ವಾಂಟಂ ಸಿದ್ಧಾಂತ. ಮ್ಯಾಕ್ಸ್ ಪ್ಲಾಂಕ್, ಎರ್ವಿನ್ ಶ್ರೋಡಿಂಜರ್, ವರ್ನರ್ ಹೈಸನ್ ಬರ್ಗ್, ಲೂಯಿಸ್ ಡಿ ಬ್ರೂಗ್ಲಿ ಮುಂತಾದ ವಿಜ್ಞಾನಿಗಳು ಈ ಸಿದ್ಧಾಂತವನ್ನು ಬೆಳೆಸಿದರು. ಸತ್ಯವು ಕಲ್ಪನೆಗಿಂತಲೂ ವಿಚಿತ್ರವಾಗಿರುತ್ತದೆ ಎಂಬ ಮಾತನ್ನು ಕ್ವಾಂಟಂ ಸಿದ್ಧಾಂತ ಸಾಬೀತುಪಡಿಸಿದೆ. ಅಂಥ ಕ್ವಾಂಟಂ ಸಿದ್ಧಾಂತದ ಬಗೆಗೆ ಒಂದು ಅಧ್ಯಾಯದಲ್ಲಿ ಬರೆದಿದ್ದೇನೆ.

ಒಟ್ಟಿನಲ್ಲಿ ವಿಜ್ಞಾನದ ಬಗ್ಗೆ ಕುತೂಹಲ, ಆಸಕ್ತಿ ಹೊಂದಿರುವವರಿಗೆ ಈ ಪುಸ್ತಕ ಉಪಯುಕ್ತವಾಗಬಹುದೆಂಬ ಆಶಯ ನನ್ನದು. ಸಾಧ್ಯವಾದಷ್ಟೂ ವೈಜ್ಞಾನಿಕ ವಿಷಯಗಳನ್ನು ಸರಳವಾದ ಪದಗಳಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ. ನಾವು ನಮ್ಮ ಪಠ್ಯಪುಸ್ತಕಗಳನ್ನು ಓದುವುದಕ್ಕಿಂತ ಬೇರೆ ಪುಸ್ತಕಗಳನ್ನು ಓದುವುದರಿಂದ ಪಡೆಯುವ ಜ್ಞಾನವೇ ಹೆಚ್ಚು ಎಂಬುದು ನನ್ನ ಸ್ವಂತ ಅನುಭವ. ಈ ಅನುಭವ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಆದರೆ ಬೇರೆ ಪುಸ್ತಕಗಳನ್ನು ಓದುವುದು ಪಠ್ಯಕ್ಕೆ ಪೂರಕ ಎಂಬುದಂತೂ ಸುಳ್ಳಲ್ಲ. ಪ್ರತಿಗಳನ್ನು ಪಡೆಯಲಿಚ್ಛಿಸುವವರು 7411982346 ಮತ್ತು 7760509857 ಈ ಸಂಖ್ಯೆಗಳಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ಜೊತೆಗೆ ನವಕರ್ನಾಟಕ ಪಬ್ಲಿಕೇಶನ್ಸ್ ಮಳಿಗೆಗಳಲ್ಲೂ ಪುಸ್ತಕ ಲಭ್ಯವಿದೆ.

No comments:

Post a Comment